ಒಂದು ನಿರ್ದಿಷ್ಟ ವ್ಯಂಜನವು ಪದ್ಯದ ಪ್ರತಿ ಸಾಲಿನ ಆದಿ, ಮಧ್ಯ, ಅಥವಾ ಅಂತ್ಯದಲ್ಲಿ ನಿಯತವಾಗಿ ಬರುವುದೇ ಪ್ರಾಸ. - ಪದ್ಯದ ಪ್ರತಿ ಸಾಲಿನ ಒಂದು ಮತ್ತು ಎರಡನೆಯ ಸ್ವರಗಳ ಮಧ್ಯದಲ್ಲಿ ಒಂದೇ ಜಾತಿಯ ವ್ಯಂಜನವಿದ್ದರೆ ಅದನ್ನು ಆದಿಪ್ರಾಸವೆಂತಲೂ — ಪ್ರತಿ ಪಾದದ ಕೊನೆಯಲ್ಲಿ ಒಂದೇ ಜಾತಿಯ ವ್ಯಂಜನವಿದ್ದರೆ ಅದನ್ನು ಅಂತ್ಯಪ್ರಾಸವೆಂತಲೂ ಕರೆಯುತ್ತಾರೆ. — ಕೆಲವೊಮ್ಮೆ ಅಪರೂಪಕ್ಕೆ ಸಾಲಿನ ಮಧ್ಯದಲ್ಲಿ ಪ್ರಾಸಾಕ್ಷರಗಳು ಬರುವುದುಂಟು ಅದನ್ನು ಒಳಪ್ರಾಸ ಅಥವಾ ಮಧ್ಯಪ್ರಾಸ ಎಂದು ಕರೆಯಲಾಗಿದೆ. ಇದು ಸಾಮಾನ್ಯವಾಗಿ ಮೊದಲ ಸಾಲಿನಲ್ಲಿ, ಅದರಲ್ಲೂ ವಿಶೇಷವಾಗಿ ತ್ರಿಪದಿಗಳಲ್ಲಿ ಕಂಡುಬರುತ್ತದೆ. ಪ್ರಾಸಾಕ್ಷರದ 1. ಹಿಂದಿನ ಸ್ವರವು ಹ್ರಸ್ವವಾಗಿದ್ದರೆ ಅದನ್ನು ಸಿಂಹಪ್ರಾಸ ಎಂತಲೂ 2. ಹಿಂದಿನ ಸ್ವರವು ದೀರ್ಘವಾಗಿದ್ದರೆ ಅದನ್ನು ಗಜಪ್ರಾಸ ಎಂತಲೂ 3. ಹಿಂದೆ ಅನುಸ್ವಾರವಿದ್ದರೆ ವೃಷಭಪ್ರಾಸ ಎಂತಲೂ 4. ಹಿಂದೆ ವಿಸರ್ಗವಿದ್ದರೆ ಅಜಪ್ರಾಸ ಎಂತಲೂ 5. ಬೇರೆಬೇರೆ ಜಾತಿಯ ಎರಡು ಮೂರು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ಶರಭಪ್ರಾಸ ಎಂತಲೂ 6. ಒಂದೇಜಾತಿಯ ಎರಡು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ಹಯಪ್ರಾಸ ಎಂತಲೂ ಕರೆಯಲ್ಪಡುವ ಆರು ವಿಧದ ಪ್ರಾಸಗಳನ್ನು ಕಾಣಬಹುದು.